ಬೆಳಗಾವಿ: ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ ಇಂದಿಗೆ 200 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ಮೈಸೂರು ದಸರಾ ಮಾದರಿಯಲ್ಲಿ ಅದ್ದೂರಿಯಾಗಿ ಕಿತ್ತೂರು ಉತ್ಸವ ಆಚರಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕಿತ್ತೂರು ಉತ್ಸವದ ಮೆರವಣಿಗೆಯಲ್ಲಿ ಭಾಗಿಯಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನದ ಕೊರತೆ ಆರೋಪದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಿತ್ತೂರು ಪ್ರಾಧಿಕಾರ ರಚನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಅದು ದಿ.ಎಸ್.ಬಂಗಾರಪ್ಪ ಅವರು. ಹಾಗಾಗಿ, ಕಿತ್ತೂರಿನ ಬಗ್ಗೆ ವಿಶೇಷ ಕಾಳಜಿ ನಮ್ಮ ಸರ್ಕಾರಕ್ಕೆ ಮತ್ತು ನಮಗೂ ಇದೆ. ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಕೊಡಿಸಲು ಪ್ರಯತ್ನಿಸುತ್ತೇವೆ ಎಂದು ಉತ್ತರಿಸಿದರು.
ಇತಿಹಾಸವನ್ನು ನೋಡಿದಾಗ ಬ್ರಿಟಿಷರ ವಿರುದ್ಧ ಮೊದಲ ಬಾರಿಗೆ ಸ್ವಾತಂತ್ರ್ಯದ ಕಹಳೆ ಊದಿದ್ದು ಕಿತ್ತೂರು ಚನ್ನಮ್ಮ. ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರಗಿಂತ ಚನ್ನಮ್ಮ ಮೊದಲು ಹೋರಾಟ ಮಾಡಿದ್ದು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಆದ್ದರಿಂದ ಅವರು, ಇವರು ದೊಡ್ಡವರು ಎನ್ನುವುದಕ್ಕಿಂತ, ದೇಶದ ಸ್ವಾಭಿಮಾನ ಎತ್ತಿ ಹಿಡಿದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತ ರಾಣಿಯ ಉತ್ಸವವನ್ನು ಎಲ್ಲರೂ ಕೂಡಿಕೊಂಡು ಚೆನ್ನಾಗಿ ಮಾಡೋಣ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ರಾಣಿ ಚನ್ನಮ್ಮ ಅಧ್ಯಯನ ಪೀಠಕ್ಕೆ ಅನುದಾನ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಚನ್ನಮ್ಮ ವಿಶ್ವವಿದ್ಯಾಲಯ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಅಧ್ಯಯನ ಪೀಠ ಕೇವಲ ನಾಮಕೆವಾಸ್ತೆ ಆಗಲು ಬಿಡುವುದಿಲ್ಲ. ಚನ್ನಮ್ಮನ ಹೆಸರು ಅಜರಾಮರಗೊಳಿಸಲಾಗುದು ಎಂದು ಭರವಸೆ ನೀಡಿದರು.
ಸಿಪಿವೈ ಮರಳಿ ಮನೆಗೆ ಬಂದಿದ್ದಾರೆ
ಸಿ.ಪಿ.ಯೋಗೇಶ್ವರ್ ನಮ್ಮವರೇ ಆಗಿದ್ದರು. ಇದೀಗ ಮರಳಿ ಗೂಡಿಗೆ ಬಂದಿದ್ದಾರೆ. ಅವರ ಆಗಮನದಿಂದ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಿದೆ. ಅವರಿಗೆ ಟಿಕೆಟ್ ಕೊಟ್ಟರೆ ಒಳ್ಳೆಯದು. ಸಿಪಿವೈ ಸ್ಪರ್ಧೆ ಮಾಡಿದರೆ ಚನ್ನಪಟ್ಟಣ ಕಾಂಗ್ರೆಸ್ ತೆಕ್ಕೆಗೆ ಬರುವುದರಲ್ಲಿ ಸಂಶಯವಿಲ್ಲ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಶಿಗ್ಗಾವಿಯಲ್ಲಿ ಲಿಂಗಾಯತ ನಾಯಕರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಲಿಂಗಾಯತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ, ಹಿಂದುಳಿದವರು ಎಂದು ನೋಡಲ್ಲ. ಗೆಲ್ಲುವ ಮಾನದಂಡ ಒಂದೇ ಗಣನೆಗೆ ತೆಗೆದುಕೊಂಡು ಟಿಕೆಟ್ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.