ಹುಬ್ಬಳ್ಳಿ: ನನಗೆ ಜೆಡಿಎಸ್ (JDS) ಚಿನ್ಹೆಯಿಂದ ಸ್ಪರ್ಧೆ ಮಾಡಲು ಯಾವುದೇ ಸಮಸ್ಯೆ ಇಲ್ಲ. ಆದರೆ ಜೆಡಿಎಸ್ ಕಾರ್ಯಕರ್ತರು ವಿರೋಧ ಮಾಡ್ತಿದ್ದಾರೆ ಎಂದು ಸಿಪಿ ಯೋಗೇಶ್ವರ್ (CP Yogeshwar) ಹೇಳಿದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ (Channapattana ByElection) ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿರುವ ಸಿ.ಪಿ ಯೋಗೇಶ್ವರ್ ಅವರಿಂದು ಬಿಜೆಪಿ (BJP) ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಹುಬ್ಬಳ್ಳಿಗೆ ತೆರಳಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ. ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯ ಇಲ್ಲ. ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆ ಮಾಡಲು ಯಾವುದೇ ಸಮಸ್ಯೆ ಇಲ್ಲ ಆದರೆ ಜೆಡಿಎಸ್ ಕಾರ್ಯಕರ್ತರು ವಿರೋಧ ಮಾಡಿದ್ದಾರೆ. ಎನ್‌ಡಿಎ ಅಭ್ಯರ್ಥಿಯಾಗುವ ಆಸೆಯಿದೆ. ಇನ್ನೂ ಅವಕಾಶವಿದೆ. ಹೈಕಮಾಂಡ್ ಒಂದು ಅವಕಾಶ ನೀಡಬೇಕು. ನಮ್ಮ ಪಕ್ಷ ನಾಯಕರು ನನ್ನ ಜೊತೆಗಿದ್ದಾರೆ. ಆದರೆ ಕುಮಾರಸ್ವಾಮಿ ಒಪ್ಪಿಗೆಗೆ ಸೂಚನೆ ನೀಡಿಲ್ಲ. ಹೀಗಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಉಪಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ. ಈ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರನಾಗಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ (Congress) ಸೇರುವ ಬಗ್ಗೆ ಯೋಚನೆ ಮಾಡಿಲ್ಲ. ನಾನು ಇಲ್ಲಿಯ ತನಕವೂ ಯಾರ ಸಂಪರ್ಕ ಮಾಡಿಲ್ಲ. ಆದರೆ ನಾಳೆ ಏನು ಆಗುತ್ತದೆ ಎನುವುದನ್ನು ಹೇಳಲು ಸಾಧ್ಯವಿಲ್ಲ ಎಂದರು.