ಹುಬ್ಬಳ್ಳಿ: ವಕ್ಫ್ ಬೋರ್ಡ್ ಆಸ್ತಿ ಜಮೀರ್ ಅಹ್ಮದ್ ಬಂದಾಗ 11 ಸಾವಿರ ಎಕರೆ ಇತ್ತು. ಈಗ ಜಿಲ್ಲಾಧಿಕಾರಿ ನನಗೆ ಮಾಹಿತಿ ಕೊಟ್ಟಂತೆ 16 ಸಾವಿರ ಎಕರೆ ಕರ್ನಾಟಕದಲ್ಲೇ ಇದೆ. 6.5 ಲಕ್ಷ ಎಕರೆ ಜಾಗ ಕ್ಲೇಮ್ ಮಾಡುತ್ತಿದ್ದಾರೆ. ಈ ಆಸ್ತಿ ಜಮೀರ್ ಅಹ್ಮದ್ ಅಪ್ಪಂದಾ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ರಾಜ್ಯದಲ್ಲೇ ಹೀಗಾದ್ರೆ ದೇಶದಲ್ಲಿ ಎರಡು ಪಾಕಿಸ್ತಾನ ಆಗುತ್ತದೆ. 1,500 ವರ್ಷಗಳ ಹಿಂದೆ ಮುಸಲ್ಮಾನರು ಎಲ್ಲಿದ್ರೂ? ಹಿಂದೂಗಳನ್ನು ಟಿಪ್ಪು ಸುಲ್ತಾನ್‍ಗೆ ಹೆದರಿ ಹಲವರು ಮತಾಂತರ ಆಗಿದ್ದಾರೆ. ಇವರಿಗೆ ಈ ದೇಶದ ಮೇಲೆ ಯಾವುದೇ ಹಕ್ಕಿಲ್ಲ. ಜಮೀರ್ ಅಹ್ಮದ್ ಖಾನ್ ಅವರ ತಾತನವರು ಮೊಘಲ್ ದಾಳಿಗೆ ಹೆದರಿ ಮತಾಂತರ ಆದವರು. ನಮ್ಮ ತಾತನವರು ಗಟ್ಟಿ, ಮೊಘಲರ ವಿರುದ್ಧ ಹೋರಾಡಿದವರು. ಮಹಾತ್ಮಾ ಎನ್ನಬಾರದು, ಗಾಂಧಿ ಮತ್ತು ನೆಹರು ಈ ದೇಶ ಹಾಳು ಮಾಡಿದರು ಎಂದು ಅವರು ಹೇಳಿದ್ದಾರೆ.
ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದಿರುವುದು ದುರಂತ. ದೇಶದ್ರೋಹಿಗಳು ಪೊಲೀಸ್ ಠಾಣೆ ಸುಡಲು ಮುಂದಾಗಿದ್ದರು. ದೇಶದಲ್ಲಿ ಯಾವುದೇ ಪಕ್ಷ ಇದ್ದರೂ ಇಂತಹದ್ದನ್ನು ಒಪ್ಪಿಕೊಳ್ಳಬಾರದು. ಈ ರೀತಿ ಮಾಡಿದ್ರೆ ಪೊಲೀಸರ ನೈತಿಕ ಬಲ ಅಡಗಿ ಹೋಗುತ್ತದೆ. ಈ ಪ್ರಕರಣ ಕೆಜೆ ಹಳ್ಳಿ ಡಿಜೆ ಹಳ್ಳಿ ನಂತರ ಬಹಳ ಗಂಭೀರವಾದದ್ದು. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ವಾಪಸ್ ತೆಗೆದುಕೊಳ್ಳಬಾರದು. ಹಾಗೇನಾದ್ರೂ ಮಾಡಿದರೆ ಹೈಕೋರ್ಟ್ ಮೆಟ್ಟಿಲು ಹತ್ತುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.