ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರ ರಾಜೀನಾಮೆ ಕೇಳುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B.Y Vijayendra) ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre) ಆಗ್ರಹಿಸಿದ್ದಾರೆ.
ಮುಡಾ ಕೇಸ್ನಲ್ಲಿ (MUDA Scam) ಸಿಎಂ ರಾಜೀನಾಮೆಗೆ ಒತ್ತಾಯಿಸಿರುವ ವಿಜಯೇಂದ್ರ ಅವರಿಗೆ ತಿರುಗೇಟು ಕೊಟ್ಟ ಖಂಡ್ರೆ, ಅನಾವಶ್ಯಕವಾಗಿ ಬಿವೂವಿ ಮಾತಾಡ್ತಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೇಳೋ ನೈತಿಕತೆ ಇವರಿಗೆ ಇಲ್ಲ. ಸಿದ್ದರಾಮಯ್ಯ ರಾಜೀನಾಮೆ ಕೇಳ್ತಿರೋ ವಿಜಯೇಂದ್ರ ರಾಜೀನಾಮೆ ಯಾವಾಗ ಅಂತ ವಿಜಯಪುರ ಭಾಗದವರು ಕೇಳ್ತಿದ್ದಾರೆ. ನಿಮ್ಮ ಕುರ್ಚಿ ಅಲುಗಾಡುತ್ತಿದೆ. ಹೀಗಿರುವಾಗ ಸಿದ್ದರಾಮಯ್ಯ ರಾಜೀನಾಮೆ ಕೇಳ್ತೀರಾ? ಎಂದು ಪ್ರಶ್ನಿಸಿದ್ದಾರೆ.
136 ಶಾಸಕರಿಂದ ಆಯ್ಕೆ ಆದ ಸಿಎಂ ಅವರ ರಾಜೀನಾಮೆಯನ್ನು ವಿಪಕ್ಷಗಳು ಕೇಳ್ತಿವೆ. ವಿಜಯೇಂದ್ರ ಅವರೇ ಶಾಸಕ ಮುನಿರತ್ನ, ಅಶೋಕ್, ಯಡಿಯೂರಪ್ಪ, ಸಿ.ಟಿ ರವಿ, ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣ ಮೇಲೆ ಆರೋಪ ಇದೆ. ಅವರ ರಾಜೀನಾಮೆ ಪಡೆದಿದ್ದೀರಾ? ಯತ್ನಾಳ್ ನಿಮ್ಮ ಕುಟುಂಬ ಬಗ್ಗೆ ಏನೋನೋ ಮಾತಾಡಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಧೈರ್ಯ ಇದೆಯೋ? ಎಂದು ಖಾರವಾಗಿ ಪ್ರಶ್ನಿದ್ದಾರೆ.
ಸಿದ್ದರಾಮಯ್ಯ ಪತ್ನಿಯನ್ನು ಕೇಸ್ನಲ್ಲಿ ಎಳೆದು ತಂದಿದ್ದೀರಿ. ರಾಜಕೀಯಕ್ಕಾಗಿ ನೀವು ಯಾವ ಮಟ್ಟಿಗೆ ಬೇಕಾದ್ರೂ ಇಳಿಯುತ್ತೀರಿ. ಬಿಜೆಪಿ ಅವರೇ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ರಿ. ಬಿಜೆಪಿ-ಜೆಡಿಎಸ್ ಕುತಂತ್ರ ಮಾಡಿ ಇಂತಹ ಆರೋಪ ಮಾಡ್ತಿದ್ದೀರಿ. ಮುಡಾ ಪ್ರಕರಣ ಪೂರ್ವ ನಿಯೋಜಿತ ಪ್ರಕರಣ. ಇದೊಂದು ಬಿಜೆಪಿ-ಜೆಡಿಎಸ್ ಸಂಚು. ಬಿಜೆಪಿ-ಜೆಡಿಎಸ್ ಕುತಂತ್ರ ನಡೆಯೋದಿಲ್ಲ. 136 ಜನ ಒಗ್ಗಟ್ಟಾಗಿ ಇದ್ದೇವೆ. ಸಿದ್ದರಾಮಯ್ಯಗೆ ನಾವೆಲ್ಲ ಬಂಡೆಯಂತೆ ಜೊತೆಗೆ ಇರುತ್ತೇವೆ. ಸರ್ಕಾರ ಸುಭದ್ರವಾಗಿದೆ. ಉತ್ತಮವಾಗಿ ಆಡಳಿತ ಕೊಡುತ್ತೇವೆ ಎಂದಿದ್ದಾರೆ.