ಬೆಳಗಾವಿ: ಮುಂಬರುವ ದಿನಗಳಲ್ಲಿ ಎಲ್ಲ ವಾಹನಗಳು ಎಥೆನಾಲ್ನಿಂದಲೇ ಸಂಚರಿಸಲಿದ್ದು, ಪೆಟ್ರೋಲ್ ಪಂಪ್ಗಳ ಬದಲು ಎಥೆನಾಲ್ ಪಂಪ್ಗಳು ಕಾರ್ಯಾಚರಿಸಲಿವೆ ಎಂದು ಕೇಂದ್ರ ಹೆದ್ದಾರಿ ಹಾಗೂ ಲೋಕೋಪಯೋಗಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಿಪ್ಪಾಣಿಯ ವಿಎಸ್ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ ಡಾ. ಪ್ರಭಾಕರ ಕೋರೆ ನಾಗರಿಕ ಗೌರವ ಸತ್ಕಾರ ಮತ್ತು ಎಂಬಿಎ-ಎಂಸಿಎ ಮಹಾವಿದ್ಯಾಲಯದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಅಕ್ಕಿ, ಜೋಳ, ಸಜ್ಜೆ, ಬಿದಿರು, ಮೆಕ್ಕೆ ಜೋಳ, ಗೋಧಿ, ಬಿದಿರಿನಿಂದಲೂ ಎಥೆನಾಲ್ ಉತ್ಪಾದಿಸಲಾಗುತ್ತಿದೆ. ನನ್ನ ಹತ್ತಿರವಿರುವ ಟೊಯೋಟಾ ಗಾಡಿ ಸಹ ಸಂಪೂರ್ಣ ಎಥೆನಾಲ್ನಿಂದ ಸಂಚರಿಸುತ್ತದೆ. ಸದ್ಯಕ್ಕೆ 25 ರೂ.ಗೆ ಒಂದು ಲೀಟರ್ ಎಥೆನಾಲ್ ಲಭ್ಯವಿದೆ. ಎಥೆನಾಲ್ ಉತ್ಪಾದನೆ ಪ್ರೋತ್ಸಾಹಿಸುವ ಮೂಲಕ ರೈತರ ಆರ್ಥಿಕಾಭಿವೃದ್ಧಿಗೆ ಶ್ರಮಿಸುವುದೇ ನಮ್ಮ ಉದ್ದೇಶ, ಎಂದ ಅವರು, ನಾಗಪುರದಲ್ಲಿ ಕಸದಿಂದ 88 ಲಕ್ಷ ಟನ್ ಏವಿಯೇಶನ್ ಬಯೋಗ್ಯಾಸ್ ತಯಾರು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಳಗಾವಿ ಮತ್ತು ಕೊಲ್ಲಾಪುರ ಏವಿಯೇಶನ್ ಬಯೋಪ್ಯೂಲ್ ತಯಾರಿಸುವ ಜಿಲ್ಲೆಗಳಾಗಿ ಗುರುತಿಸಿಕೊಳ್ಳಲಿವೆ”, ಎಂದು ವಿಶ್ವಾಸ ವ್ಯಕ್ತಪಡಿಸಿದರು
ಅಮೆರಿಕದಲ್ಲಿ ಶೇ. 60ರಷ್ಟು ವೈದ್ಯರು ಭಾರತೀಯರಿದ್ದಾರೆ. ತಾಂತ್ರಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿಭಾವಂತ ಮಾನವಶಕ್ತಿ ಭಾರತದಲ್ಲಿ ಮಾತ್ರ ಇರುವುದರಿಂದ ಇಡೀ ವಿಶ್ವ ಭಾರತವನ್ನು ಬಹು ನಿರೀಕ್ಷೆಯಿಂದ ಗಮನಿಸುತ್ತಿದೆ. ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ತಯಾರಿಸುವ ಕೆಲಸವನ್ನು ಕೆಎಲ್ಇಯಂತಹ ಶಿಕ್ಷಣ ಸಂಸ್ಥೆಗಳು ಈ ಭಾಗದಲ್ಲಿ ಮಾಡುತ್ತಿವೆ”, ಎಂದು ಅವರು ಶ್ಲಾಘಿಸಿದ ಅವರು, ಬೆಳಗಾವಿ ಬೈಪಾಸ್ಗೆ 800 ಕೋಟಿ ರೂ. ನೀಡಲಾಗುವುದು. ಗೋವಾ-ಹೈದರಾಬಾದ್ ರಸ್ತೆ ಅಭಿವೃದ್ಧಿಗೆ ಅನುದಾನವಿದ್ದು, ಯಾವುದೇ ಕ್ಷೇತ್ರ ಹಿಂದೆ ಬೀಳಲು ಬಿಡುವುದಿಲ್ಲ, ಎಂದು ತಿಳಿಸಿದರು.