ಬೆಂಗಳೂರು: ಬೆಂಗಳೂರು (Bengaluru) ಪೂರ್ವ ತಾಲೂಕು ಕೆ.ಆರ್.ಪುರ (KR Pura) ಹೋಬಳಿ ಕೊತ್ತನೂರಿನ ಸರ್ವೆ ನಂ.48ರಲ್ಲಿ ಸುಮಾರು 700 ಕೋಟಿ ರೂ. ಮೌಲ್ಯದ 9 ಎಕರೆ ಅರಣ್ಯ ಭೂಮಿ (Forest Land) ಒತ್ತುವರಿಯನ್ನು ತೆರವುಗೊಳಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ (Eshwar Khandre) ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಹಸಿರು ಹೊದಿಕೆ ಹೆಚ್ಚಿಸಲು 1999-2000 ಸಾಲಿನಲ್ಲಿ ಕೊತ್ತನೂರು ಸರ್ವೆ ನಂ.48ರಲ್ಲಿ 22.08 ಎಕರೆ ಜಮೀನಿನಲ್ಲಿ ನೆಡುತೋಪು ಅಭಿವೃದ್ಧಿಪಡಿಸುವ ಸಲುವಾಗಿ ಈ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲಾಗಿದೆ.
ಆದರೆ ಈ ಜಮೀನು ವಶಕ್ಕೆ ಪಡೆದು ಅರಣ್ಯ ಬೆಳೆಸುವಲ್ಲಿ ಹಿಂದಿನ ಅಧಿಕಾರಿಗಳ ವಿಫಲರಾಗಿದ್ದರು. 22.08 ಎಕರೆ ಭೂಮಿಯ ಪೈಕಿ 13 ಎಕರೆ ಜಮೀನನ್ನು ಅರಣ್ಯ ಇಲಾಖೆಗೆ ವಹಿಸಲಾಗಿದೆ ಎಂದು ಅಂದಿನ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಆರ್ಹೆಚ್ಎಸ್ (2) 44/82-83 ಡಿಟಿ 25.01.2000ರ ಆದೇಶದಂತೆ ಪಹಣಿ (RTC) ಯಲ್ಲಿ ನಮೂದಾಗಿದೆ.
ಈ ಜಮೀನಿನ ನಕ್ಷೆ ಪಡೆದು ಉಳಿದ 9 ಎಕರೆಯ ದಾಖಲೆಗಳನ್ನೂ ಮಾಡಿಸಿ, ಸುಮಾರು 700 ಕೋಟಿ ರೂ. ಬೆಲೆ ಬಾಳುವ ಜಮೀನು ಒತ್ತುವರಿಯಾಗಿದ್ದರೆ ಕ್ರಮವಹಿಸಿ. ಜಮೀನನ್ನ ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು 64(ಎ) ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳಿಗೆ ಖಂಡ್ರೆ ಸೂಚನೆ ನೀಡಿದ್ದಾರೆ.