ಬೆಂಗಳೂರು: ಜನ ಬೈದರೂ ನೀರಿನ ದರ ಹೆಚ್ಚಳ ಮಾಡಿಯೇ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಗುರುವಾರ ನಡೆದ ಕಾವೇರಿ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಧ್ಯಮದವರು ಬೈಯಲಿ, ಜನ ವಿರೋಧ ವ್ಯಕ್ತಪಡಿಸಲಿ, ವಿಪಕ್ಷಗಳು ಟೀಕಿಸಲಿ, ತಲೆಕೆಡಿಸಿಕೊಳ್ಳುವುದಿಲ್ಲ. ನೀರಿನ ದರ ಹೆಚ್ಚಳ ಮಾಡುತ್ತೇವೆ ಎಂದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ನೀರಿನ ದರದ ಬಗ್ಗೆ ಮಾಹಿತಿ ಕೊಡಿ. ಎಷ್ಟು ವರ್ಷಗಳಿಂದ ನೀರಿನ ದರ ಹೆಚ್ಚಿಸಿಲ್ಲ ಎಂದು ಮಾಹಿತಿ ಕೊಡಿ ಎಂಬುದಾಗಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ವೇದಿಕೆ ಮೇಲೆಯೇ ಅಧಿಕಾರಿಗಳಿಗೆ ಸೂಚಿಸಿದರು.
ನಾಗರಿಕರಿಗೆ ಎಷ್ಟೇ ಮಾಡಿದರೂ ಉಪಕಾರ ಸ್ಮರಣೆ ಇಲ್ಲ. ಎಷ್ಟೇ ಒಳ್ಳೆಯದು ಮಾಡಿದರೂ ಬೈತಾರೆ, ಕಮೆಂಟ್ ಮಾಡುತ್ತಾರೆ. ಬಿಲ್ ಪಾವತಿಸುವರು ಪಾವತಿ ಮಾಡುತ್ತಾರೆ. ಕೆಲವರು ಪಾವತಿ ಮಾಡಲ್ಲ ಎಂದು ಅವರು ಹೇಳಿದರು.
ಕಳೆದ 8-9 ವರ್ಷದಿಂದ ನೀರಿನ ದರ ಏರಿಕೆ ಮಾಡಿಲ್ಲ. ನೀರಿನ ದರ ಹೆಚ್ಚಿಸಬೇಕು, ಅಂತರ್ಜಲ ಹೆಚ್ಚಳ ಆಗಬೇಕು. ಮಂಡಳಿ ನಷ್ಟದಲ್ಲಿದೆ, ಸಂಬಳ ಕೊಡುವುದಕ್ಕೆ ಆಗುತ್ತಿಲ್ಲ. ಮಂಡಳಿಯ ವಿದ್ಯುತ್ ದರ ಪಾವತಿ ಮಾಡಲು ಆಗುತ್ತಿಲ್ಲ. ಕೆಲವು ಸೆಕ್ಷನ್ ನೋಡಿ ದರ ನಿಗದಿ ಮಾಡಬೇಕು. ಎಷ್ಟು ದರ ಏರಿಕೆ ಮಾಡಬೇಕು ಎಂದು ಇನ್ನೂ ನಿರ್ಧಾರ ಮಾಡಿಲ್ಲ. ಕಮಿಟಿ ಸಭೆ, ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ. ಇಂದಿನ ಸಂಪುಟ ಸಭೆಯಲ್ಲಿ ನೀರಿನ ದರ ಹೆಚ್ಚಳ ವಿಷಯ ಪ್ರಸ್ತಾಪವಿಲ್ಲ ಎಂದು ಅವರು ತಿಳಿಸಿದರು.