ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳಿಗೆ ಅರ್ಹರಾಗಿರುವ ಅಭ್ಯರ್ಥಿಗಳು ನೋಂದಣಿ ಮಾಡಿಸಿಕೊಳ್ಳಲು ಮತ್ತು ಯುಜಿ ನೀಟ್ ರೋಲ್ ನಂಬರನ್ನು ನಮೂದಿಸಲು ಆ.16ರ ಬೆಳಗ್ಗೆ 6 ಗಂಟೆಯಿಂದ ಆ.19ರ ಬೆಳಗ್ಗೆ 10 ಗಂಟೆಯವರೆಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಇದು ಅಂತಿಮ ಅವಕಾಶವಾಗಿದ್ದು, ಅರ್ಹರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ತಿಳಿಸಿದೆ.
ಇದುವರೆಗೂ ನೀಡಿದ್ದ ಅವಕಾಶಗಳನ್ನು ಬಳಸಿಕೊಳ್ಳದೇ ಇರುವವರು ಆನ್ಲೈನ್ ಮೂಲಕ ನೋಂದಾಯಿಸಿ, ಶುಲ್ಕವನ್ನು ಪಾವತಿಸಬಹುದು. ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ಜಾಲತಾಣವನ್ನು ನೋಡಬಹುದು ಎಂದು ಪ್ರಕಟಣೆ ಹೇಳಿದೆ.
ಇದೇ ರೀತಿಯಲ್ಲಿ ಈಗಾಗಲೇ ಎರಡು ಹಂತಗಳಲ್ಲಿ ನಡೆದಿರುವ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗದಿದ್ದ ಎನ್ಆರ್ಐ/ವಿದೇಶಿ ವಿದ್ಯಾರ್ಥಿಗಳು ಮತ್ತು ಬೆಂಗಳೂರಿನ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಕೆಟಗರಿ-2ರಿಂದ ಕೆಟಗರಿ-8ರ ವ್ಯಾಪ್ತಿಯ ವಿದ್ಯಾರ್ಥಿಗಳು ಆ.19ರ ಬೆಳಗ್ಗೆ 11 ಗಂಟೆಗೆ ಮೂಲ ಪ್ರಮಾಣಪತ್ರಗಳೊಂದಿಗೆ ಪ್ರಾಧಿಕಾರದ ಕಚೇರಿಗೆ ಖುದ್ದಾಗಿ ಹಾಜರಾಗಬೇಕು ಎಂದು ಮಾಹಿತಿ ನೀಡಿದೆ.