Ad imageAd image

ಅಪಘಾತ ಪ್ರಕರಣ – ರಾಜ್ಯದಲ್ಲಿ ಸಾವಿನ ಸಂಖ್ಯೆ 16% ಇಳಿಕೆ

ratnakar
ಅಪಘಾತ ಪ್ರಕರಣ – ರಾಜ್ಯದಲ್ಲಿ ಸಾವಿನ ಸಂಖ್ಯೆ 16% ಇಳಿಕೆ
WhatsApp Group Join Now
Telegram Group Join Now

ಬೆಂಗಳೂರು: ನಿರ್ಲಕ್ಷ್ಯದ ಹಾಗೂ ವೇಗದ ಚಾಲನೆಗೆ ಟ್ರಾಫಿಕ್ ಪೊಲೀಸರು ಕಡಿವಾಣ ಹಾಕಿದ ಪರಿಣಾಮ ರಾಜ್ಯದಲ್ಲಿ ಅಪಘಾತ ಪ್ರಕರಣದಿಂದ  ಸಾವಿನ ಸಂಖ್ಯೆಯಲ್ಲಿ 16% ಇಳಿಕೆಯಾಗಿದೆ.

ವೇಗದ ಮಿತಿಗೆ ಕಡಿವಾಣ, ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸುವುದು, ಸಂಚಾರ ನಿಯಮಗಳ ಪಾಲನೆಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ರಾಜ್ಯದಲ್ಲಿ ಸಂಭವಿಸಿದ ಅಪಘಾತ ಪ್ರಕರಣಗಳಲ್ಲಿ ಸಾವಿನ ಸಂಖ್ಯೆ ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಕಡಿಮೆಯಾಗಿರುವುದು ಕೊಂಚ ಆಶಾದಾಯಕವಾಗಿದೆ. ರಸ್ತೆ ಹಾಗೂ ಸುರಕ್ಷತೆ ಇಲಾಖೆ ಕೈಗೊಂಡ ಸುಧಾರಣೆಗಳಿಂದ ಈ ಬೆಳವಣಿಗೆಯಾಗಿದೆ.

2023ರ ಮೇ ತಿಂಗಳಿಂದ ಜುಲೈವರೆಗೆ 3122 ಮಂದಿ ಅಪಘಾತದಿಂದ ಸಾವಿಗೀಡಾಗಿದ್ದರು. ಪ್ರಸ್ತಕ ವರ್ಷದ ಇದೇ ಮೂರು ತಿಂಗಳ ಅವಧಿಯಲ್ಲಿ 2682 ಮಂದಿ ಸಾವನ್ನಪ್ಪಿದ್ದಾರೆ. ಪ್ರತಿದಿನ ಸರಾಸರಿ 29 ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕಳೆದ ವರ್ಷ ಸರಾಸರಿ 34 ಮಂದಿ ರಸ್ತೆ ಅಪಘಾತದಲ್ಲಿ ಬಲಿಯಾಗಿದ್ದರು.

ಕಳೆದ ವರ್ಷ ಮೇ ತಿಂಗಳಿಂದ ಜುಲೈವರೆಗೂ ನಗರದಲ್ಲಿ (Bengaluru) ನಡೆದಿದ್ದ ರಸ್ತೆ ಅಪಘಾತದಲ್ಲಿ 412 ಮಂದಿ ಸಾವನ್ನಪ್ಪಿದ್ದರು. ಈ ವರ್ಷದ ಇದೇ ಅವಧಿಯಲ್ಲಿ 192 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಈ ವರ್ಷ ಪ್ರತಿದಿನ ಸಾವಿನ ಸಂಖ್ಯೆಯಲ್ಲಿ 4 ಮಂದಿಯಿಂದ 2ಕ್ಕೆ ಇಳಿಕೆಯಾಗಿದೆ.

ರಾಷ್ಟ್ರ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಲು, ವೇಗದ ಮಿತಿ ಮೀರಿದ ವೇಗದಲ್ಲಿ ವಾಹನ ಚಾಲನೆ ಹಾಗೂ ಸಂಚಾರ ನಿಯಮ ಉಲ್ಲಂಘನೆ,
ರಸ್ತೆ ಮೂಲಸೌಕರ್ಯ ಕೊರತೆ, ಚಾಲಕರ ಅಜಾಗರೂಕ ಚಾಲನೆ ಕಾರಣವಾಗಿದೆ.

ಅಪಘಾತ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರು ತೆಗೆದುಕೊಂಡ ಕ್ರಮಗಳು, ವೇಗದ ಮಿತಿ ನಿಗದಿ, ನಿರಂತರ ಡ್ರಂಕ್ & ಡ್ರೈವ್ ತಪಾಸಣೆ, ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸಿದವರ ವಿರುದ್ಧ ವಿಶೇಷ ಕಾರ್ಯಾಚರಣೆ, ಗೂಡ್ಸ್ ವಾಹನಗಳಿಗೆ ಶಿಸ್ತು ಪಥ, ಬ್ಲ್ಯಾಕ್ ಸ್ಪಾಟ್ ಗಳಲ್ಲಿರುವ ರಸ್ತೆ ಲೋಪದೋಷಗಳ ನಿವಾರಣೆಯಂತಹ ಕ್ರಮಗಳು ಅಪಘಾತದಲ್ಲಿ ಸಾವಿನ ಸಂಖ್ಯೆ ಕಡಿಮೆಗೊಳಿಸಲು ಕಾರಣವಾಗಿವೆ.

WhatsApp Group Join Now
Telegram Group Join Now
Share This Article