Ad imageAd image

ಓದು ಬದುಕಿನ ಭಾಗವಾಗಬೇಕು: ರಾಜಕುಮಾರ ಕುಲಕರ್ಣಿ

ratnakar
ಓದು ಬದುಕಿನ ಭಾಗವಾಗಬೇಕು: ರಾಜಕುಮಾರ ಕುಲಕರ್ಣಿ
WhatsApp Group Join Now
Telegram Group Join Now

ಬಾಗಲಕೋಟೆ: ಗ್ರಂಥಾಲಯಕ್ಕೆ ಚಳುವಳಿಯ ಸ್ವರೂಪ ನೀಡಿ, ಶಿಕ್ಷಣ ತರಬೇತಿ ಮತ್ತು ಸಂಶೋಧನಾ ವ್ಯವಸ್ಥೆಯ ಮೂಲಕ ಲೈಬ್ರರಿ ಕ್ಷೇತ್ರವನ್ನು ತ್ವರಿತಗತಿಯಲ್ಲಿ ಬದಲಾಯಿಸಿದ ಡಾ.ಎಸ್.ಆರ್ ರಂಗನಾಥ ಅವರು ಗ್ರಂಥಾಲಯದ ಹರಿಕಾರರಾಗಿ ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ ಎಂದು ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಮುಖ್ಯ ಗ್ರಂಥಪಾಲಕರಾದ ರಾಜಕುಮಾರ ಕುಲಕರ್ಣಿ ಹೇಳಿದರು.

ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಿಂದ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ.ಎಸ್.ಆರ್ ರಂಗನಾಥ ಅವರು ಗಣಿತ ವಿಷಯದಲ್ಲಿ ಶಿಕ್ಷಣ ಪಡೆದು ಉಪನ್ಯಾಸಕರಾಗಿದ್ದ ಅವರು ಗ್ರಂಥಪಾಲಕರಾಗಿ ನೇಮಕಗೊಂಡು ಲಂಡನ್ ನಲ್ಲಿ ಗ್ರಂಥಾಲಯದ ಕುರಿತು ತರಬೇತಿ ಪಡೆದು ಮದ್ರಾಸ್ ವಿವಿಯ ಗ್ರಂಥಾಲಯವನ್ನು ಪ್ರಯೋಗಾಲಯವಾಗಿಸಿಕೊಂಡು ಈ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ ಎಂದರು.

ವೈಜ್ಞಾನಿಕ ಕ್ರಮದಲ್ಲಿ ಪುಸ್ತಕ ವರ್ಗೀಕರಣ ಜೋಡಣೆ, ಗ್ರಂಥಾಲಯದಲ್ಲಿರುವ ಪುಸ್ತಕಗಳ ಪಟ್ಟಿ ರಚನೆ ಮಾಡಿ ಗ್ರಂಥಾಲಯದ ಪಂಚ ಸೂತ್ರಗಳನ್ನು ರೂಪಿಸಿದ್ದರು. ಇಂದಿಗೂ ಅವರ ಸೂತ್ರಗಳ ಆಧಾರದ ಮೇಲೆಯೇ ಗ್ರಂಥಾಲಯಗಳನ್ನು ರಚಿಸಲಾಗುತ್ತಿದೆ. ಬಳಿಕ ಗ್ರಂಥಾಲಯ ಶಿಕ್ಷಣ ತರಬೇತಿ ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿ ಕೊನೆಯ ದಿನದಲ್ಲಿ ಶಾರಧಾ ಎಂಡೋಮೆಂಟಲ್ ಟ್ರಸ್ಟ್ ರಚಿಸಿ ತಮ್ಮ ಆಸ್ತಿಯನ್ನೆಲ್ಲ ಗ್ರಂಥಾಲಯ ಅಭಿವೃದ್ಧಿಗೆ ಧಾರೆ ಎರೆದಿದ್ದಾರೆ ಅವರ ಈ ಪರಿಶ್ರಮದಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಲೈಬ್ರರಿಗಳನ್ನು ಕಾಣುತ್ತಿದ್ದೇವೆ ಎಂದರು.

ಸಮಾಜದ ಅಭಿವೃದ್ಧಿಗೆ ಅತ್ಯುತ್ತಮ ಓದುಗಾರರ ಅವಶ್ಯಕತೆ ಇದೆ. ಓದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಅದನ್ನೇ ಜೀವನವನ್ನಾಗಿ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪರೀಕ್ಷಾ ಆಧಾರಿತ ಸಿದ್ಧ ಮಾಹಿತಿಯನ್ನು ಬಯಸುತ್ತಿದ್ದಾರೆ. ಓದುಗರ ಬದಲಾಗಿ ಕೇವಲ ಕೇಳುಗರು ಮತ್ತು ನೋಡುಗರು ಹೆಚ್ಚುತ್ತಿದ್ದಾರೆ. ವಿವರಣಾತ್ಮಕ ಪುಸ್ತಕಗಳ ಕಡೆಗೆ ನಿರಾಸಕ್ತಿ ತೋರುತ್ತಿರುವುದರಿಂದ ವಿಷಯ ವಿಶ್ಲೇಷಣಾ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಾರೆ. ಹೊಸ ಸಂಗತಿ ರೂಪಗೊಳ್ಳಬೇಕಾದರೆ ಪ್ರಶ್ನೆಗಳ ಉಗಮ ಅವಶ್ಯಕ. ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮಾಡುವ ಹವ್ಯಾಸ ಕಳೆಗುಂದುತ್ತಿದೆ. ತಂತ್ರಜ್ಞಾನದ ಅಭಿವೃದ್ಧಿಯಿಂದ ಸಂಶೋಧನೆಯಿಂದ ಮತ್ತಷ್ಟು ಹಿಂದೆ ಸರೆಯುತ್ತಿದ್ದಾರೆ ಇದರಿಂದ ವಿದ್ಯಾರ್ಥಿಗಳು ಅಸಂವೇದಿಗಳಾಗುತ್ತಿರುವುದು ವಿಷಾದಕರ ಸಂಗತಿ ಎಂದರು.

ಪ್ರಾಚಾರ್ಯರಾದ ಎಸ್.ಆರ್ ಮುಗನೂರಮಠ ಅವರು ಮಾತನಾಡಿ ಪುಸ್ತಕಗಳು ಜಗತ್ತನ್ನು ಆಳುತ್ತವೆ. ಪ್ರಾಚೀನ ಕಾಲದಿಂದಲೂ ಶಿಕ್ಷಣ ಕೇಂದ್ರಗಳಲ್ಲಿ ಗ್ರಂಥಾಲಯಗಳನ್ನು ನಾವು ಕಾಣುತ್ತೇವೆ. ನಳಂದಾದಷ್ಟೆ ಹಳೆಯದಾದ
ಕುದರೆ ಸಾಲೋಟಗಿ ಮತ್ತು ಗುಲ್ಬರ್ಗದ ನಾಗಾವಿಗಳು ಪ್ರಾಚೀನ ಘಟಿಕಾಸ್ಥಳವಾಗಿವೆ. ಭಾವಣೆ ಮತ್ತು ಜ್ಞಾನದ ಬೆಸುಗೆಯಾಗಬೇಕಾದರೆ ಓದುವುದು ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಗ್ರಂಥಪಾಲಕರಾದ ಸಂತೋಷ ಗುರವ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕರಾದ ಡಾ. ಎ.ಯು ರಾಠೋಡ ಸೇರಿದಂತೆ ಕಲಾ ಮಹಾವಿದ್ಯಾಲಯದ ಎಲ್ಲ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article