ಬೆಂಗಳೂರು : ಸಿಎಂ ಸಿದ್ದರಾಮಯ್ಯ ವಿರುದ್ದ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ಕೊಟ್ಟರೆ ಕಾನೂನು ಹೋರಾಟ ಮಾಡುತ್ತೇವೆ. ಕ್ಯಾಬಿನೆಟ್ ನಿರ್ಣಯವನ್ನು ರಾಜ್ಯಪಾಲರು ಒಪ್ಪುತ್ತಾರೆ ಅಂತ ನಮಗೆ ರಾಜ್ಯಪಾಲರ ಮೇಲೆ ವಿಶ್ವಾಸ ಇದೆ. ನೊಟೀಸ್ ವಾಪಸ್ ಪಡೆಯಬೇಕು. ಈ ಪ್ರಕರಣದಲ್ಲಿ ಸತ್ಯಾಂಶ ಇಲ್ಲ ಅಂತ ನಿರ್ಣಯ ಮಾಡಿ ಕಳುಹಿಸಿದಾಗ ಅದನ್ನು ಮೀರಿ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಡುತ್ತಾರೆ ಎಂದು ನಾನು ಅಂದುಕೊಳ್ಳೊಲ್ಲ ಅಂತ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯಪಾಲರಿಗೆ ಅವರಿಗೆ ದತ್ತವಾದ ಅಧಿಕಾರ ಇರಬಹುದು. ಆದರೆ ಕ್ಯಾಬಿನೆಟ್ ಸಲಹೆಯನ್ನು ಅವರು ಅಷ್ಟು ಸುಲಭವಾಗಿ ತಿರಸ್ಕಾರ ಮಾಡುವುದಿಲ್ಲ ಎಂದು ಅಂದುಕೊಂಡಿದ್ದೇನೆ. ಅದನ್ನು ಮೀರಿಯೂ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದರೆ ನಾವು ಕೂಡಾ ಕಾನೂನು ಹೋರಾಟವನ್ನು ಮಾಡುತ್ತೇವೆ ಎಂದು ತಿಳಿಸಿದರು.