Ad imageAd image

ಸಂಗೀತ ಕ್ಷೇತ್ರದಲ್ಲಿ ಸಗುಣಾ ಕೊಡುಗೆ ಅಪಾರ: ಡಾ|| ಹೆಚ್. ಎಫ್ ಯೋಗಪ್ಪನವರ

ratnakar
ಸಂಗೀತ ಕ್ಷೇತ್ರದಲ್ಲಿ ಸಗುಣಾ ಕೊಡುಗೆ ಅಪಾರ: ಡಾ|| ಹೆಚ್. ಎಫ್ ಯೋಗಪ್ಪನವರ
WhatsApp Group Join Now
Telegram Group Join Now

ಬಾಗಲಕೋಟೆ: ಸಂಗೀತದಿಂದ ಆರೋಗ್ಯ ಸುಧಾರಿಸಲು ಸಾಧ್ಯ, ನರ ಮಂಡಲದಲ್ಲಿ ಶಕ್ತಿ ಹರಿಸುವ, ಮಳೆ ಬರೆಸಿ ದೀಪ ಹೊತ್ತಿಸುವ ಶಕ್ತಿ ಸಂಗೀತಕ್ಕಿದ್ದು ಈ ಕ್ಷೇತ್ರದಲ್ಲಿ ಸಗುಣ ಚಂದಾವರಕರ ತಮ್ಮದೆಯಾದ ಛಾಪು ಮೂಡಿಸಿದ್ದಾರೆಂದು ಖ್ಯಾತ ವುಯದ್ಯರಾದ ಡಾ|| ಹೆಚ್. ಎಫ್ ಯೋಗಪ್ಪನವರ ಹೇಳಿದರು.

ನಗರದ ಬಿವ್ಹಿವ್ಹಿ ಸಂಘದ ನೂತನ ಸಭಾ ಭವನದಲ್ಲಿ ಅಮೃತ ಮಾನವ ಸಂಪನ್ಮೂಲ ಅಭಿವೃದ್ಧಿ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಕರ್ನಾಟಕ ಕಲಾಶ್ರೀ, ಗಾನ ಚತುರೆ, ವಿದುಷಿ ಸಗುಣಾ ಚಂದಾವರಕರ ಅವರ ಸಗುಣ ಗಾನ ತರಂಗ ಸಂಸ್ಮರಣ ಗ್ರಂಥ ಬಿಡುಗಡೆ ಮತ್ತು ನಾದನಿನಾದ ನುಡಿ ನಮನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂಗೀತ ಕೌಟುಂಬಿಕ ಹಿನ್ನಲೆ ಇಲ್ಲದೆ ಸಂಗೀತ ಲೋಕದಲ್ಲಿ ಸಾಧನೆ ಮಾಡಿದ ಯಶಸ್ಸು ಸಗುಣಾ ಅವರದ್ದು. 1953ರಲ್ಲಿ ಹುಬ್ಬಳ್ಳಿಯಿಂದ ಸಂಗೀತ ಅಭ್ಯಾಸವನ್ನು ಪ್ರಾರಂಭಿಸಿ ನಿಡಗುಂದಿ, ಪುರಾಣಿಕಮಠ, ಸಂಗಮೇಶ ಗುರವರಂತಹ ಗುರುಗಳಿಂದ ಸಂಗೀತ ಶಿಕ್ಷಣ ಪಡೆದು ಹಿಂದುಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಸಾಕ್ಷ್ಯ ಮೂಡಿಸಿದ್ದಾರೆ ಎಂದರು.

ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಗಾನಗೋಷ್ಟಿಯಿಂದ ಕಾರ್ಯಕ್ರಮಗಳನ್ನು ಪ್ರಾರಂಭಿಸಿ ಸತತ 40 ವರ್ಷಗಳ ಕಾಲ ಸಂಗೀತ ಸೇವೆ ಸಲ್ಲಿಸಿ ಹಿಂದುಸ್ಥಾನಿ ಸಂಗೀತಗಾರ್ತಿ ಪಟ್ಟವನ್ನು ಗಿಟ್ಟಿಸಿಕೊಂಡಿದ್ದರು. ಹೃದಯ ಚಿಕಿತ್ಸೆ ಕುಟುಂಬ ಸಮಸ್ಯೆಗಳ ನಡುವೆಯೂ ಸಂಗೀತವನ್ನು ಮುಂದುವರೆಸಿ ಕರ್ನಾಟಕದ ಕಲಾಶ್ರೀ ಪ್ರಶಸ್ತಿಗೆ ಭಾಜನರಾಗಿ ಸಂಗೀತ ಕಚೇರಿಯ ನಿರ್ಣಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ ಎಂದರು.

ಸಂಗೀತವು ಭಾವ ಜೀವನವನ್ನು ಸುಧಾರಿಸಿ‌ ಕೇಳುಗರಲ್ಲಿ ದೈವಿಶಕ್ತಿ ಹೆಚ್ಚಿಸುತ್ತದೆ. ಗುರುವಿಲ್ಲದೆ ಸಂಗೀತವನ್ನು ಕಲಿಯಲು ಸಾಧ್ಯವಿಲ್ಲ. ಪಂಚಾಕ್ಷರ ಗವಾಯಿ, ಪುರಾಣಿಕಮಠ, ಭೀಮಸೇನ ಜೋಷಿ, ಮಲ್ಲಿಕಾರ್ಜುನ ಮನಸೂರ, ಗಂಗೂಬಾಯಿ ಹಾನಗಲ್ ರಂತಹ ಖ್ಯಾತ ಗಾಯಕರನ್ನು ಭಾರತಕ್ಕೆ ಕೊಡುಗೆ ನೀಡಿದ ಖ್ಯಾತಿ ಕರ್ನಾಟಕದ್ದಾಗಿದೆ ಎಂದರು.

ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷರಾದ ವೀರಣ್ಣ ಚರಂತಿಮಠ ಅವರು ಮಾತನಾಡಿ ಚಂದಾವರಕರ ಕುಟುಂಬ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಆದರ್ಶವಾದ ಕುಟುಂಬವಾಗಿದೆ. ಅತ್ತೆ ಸೊಸೆಯ ಸಂಬಂಧದ ನಿದರ್ಶನವನ್ನು ಈ ಕಾರ್ಯಕ್ರಮ ಪ್ರಸ್ತುತ ಪಡಿಸಿದೆ. ಸಗುಣಾ ಚಂದಾವರಕರ ಅವರ ಸಾಧನೆಯನ್ನು ಅವರ ಮರಣದ ನಂತರವು ಸಮಾಜಕ್ಕೆ ಸಾರುವ ಕೆಲಸ ಮಾಡುತ್ತಿರುವ ಮೀನಾ ಚಂದಾವರಕರ ಅವರ ಕಾರ್ಯವೈಖರಿ ಪ್ರಮುಖವಾಗಿದ್ದು. ಒಂದು ಕುಟುಂಬದ ಯಶಸ್ಸು ಮಹಿಳೆಯರ ಮೇಲಿರುತ್ತದೆ ಎನ್ನುವುದನ್ನು ಸಾಧಿಸಿತೋರಿಸಿದ್ದಾರೆ ಎಂದರು.

ಇದೇ ವೇಳೆ ಖ್ಯಾತ ಹಿಂದುಸ್ತಾನಿ ಗಾಯಕರಾದ ಧಾರವಾಡದ ಡಾ. ಪಂ ಕೈವಲ್ಯಕುಮಾರ ಗುರವ ಸಂಗೀತ ಕಾರ್ಯಕ್ರಮ ನೀಡಿದರು. ಹಿಂದುಸ್ತಾನಿ ಸಂಗೀತ ಮತ್ತು ವಚನ ಗಾಯನವನ್ನು ಪ್ತಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಬಿವ್ಹಿವ್ಹಿ ಸಂಘದ ಉನ್ನತ ಶಿಕ್ಷಣ ಸಲಹೆಗಾರರಾದ ಡಾ. ಮೀನಾ ಚಂದಾವರಕರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಹರೀಶ ಹೆಗಡೆ ಸಗುಣ ಗಾನ ತರಂಗ ಪುಸ್ತಕದ ಕುರಿತು ಮಾತನಾಡಿದರು ಬಿವ್ಹಿವ್ಹಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಮಲ್ಲಾಪುರ ಶ್ರೀ ಗೋಪಾಲಕೃಷ್ಣದೇವ ಶ್ರೀ ಅವಡಿಮಠದ ಮಾಳಮುದ್ರಾಧಿಕಾರಿಗಳಾದ ನರೇಂದ್ರ ಉಭಯಕರ, ಹಿಂದುಸ್ಥಾನಿ ಸಂಗೀತ ಗಾಯಕರಾದ ಡಾ. ಪಂ.ಕೈವಲ್ಯಕುಮಾರ ಗುರವ, ಎಸ್.ಎನ್ ವೈದ್ಯಕೀಯ ಮಹಾವಿದ್ಯಾಲಯದ ಓಬಿಜಿ ವಿಭಾಗದ ಮುಖ್ಯಸ್ಥರಾದ ಡಾ. ಆಶಾಲತಾ ಮಲ್ಲಾಪುರ, ವಿದ್ಯಾಪ್ರಸಾರಕ ಮಂಡಳ ಕಾರ್ಯಾಧ್ಯಕ್ಷರಾದ ಶ್ರೀಲತಾ ಹೆರಂಜಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article