ಬಾಗಲಕೋಟೆ: ಲಾಕ್ ಮಾಡಲಾಗಿರುವ ಹಿಪ್ಪರಗಿ ಬ್ಯಾರೇಜ್ (Hipparagi Barrage) ಗೇಟ್ನಿಂದ ನೀರು ಹರಿದು ಹೋಗುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಕೃಷ್ಣ ನದಿಗೆ (Krishna River) ಅಡ್ಡಲಾಗಿ ಹಿಪ್ಪರಗಿ ಬ್ಯಾರೇಜ್ ನಿರ್ಮಾಣವಾಗಿದ್ದು ಒಟ್ಟು 22 ಗೇಟ್ಗಳ ಪೈಕಿ 21 ಗೇಟ್ಗಳು ಪೂರ್ಣವಾಗಿ ಬಂದ್ ಆಗಿದೆ. ಆದರೆ ಏಳನೇ ಗೇಟ್ ಪೂರ್ಣವಾಗಿ ಲಾಕ್ ಆಗದ ಕಾರಣ ಮೂರು ಅಡಿ ಕೆಳಮಟ್ಟದಿಂದ ನೀರು ಹರಿಯುತ್ತಿದೆ.
7ನೇ ಗೇಟ್ ಪೂರ್ಣ ಕೆಳಗಿಳಿಯದೇ ಮೂರಡಿ ಅಂತರದಲ್ಲೇ ನಿಂತಿದೆ. ಗೇಟ್ ಕೆಳಗಡೆ ಯಾವುದೋ ವಸ್ತು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈಗ ದುರಸ್ತಿ ಕಾರ್ಯದಲ್ಲಿ ಬ್ಯಾರೇಜ್ ಸಿಬ್ಬಂದಿ ತೊಡಗಿದ್ದಾರೆ.
ಬೇಸಿಗೆ ಕಾಲದಲ್ಲಿ ಜಮಖಂಡಿ ನಗರ ಹಾಗೂ ಹಳ್ಳಿಗೆ ಇಲ್ಲಿಂದಲೇ ನೀರು ಸರಬರಾಜು ಮಾಡಲಾಗುತ್ತಿದೆ. ಆದಷ್ಟು ಬೇಗ ದುರಸ್ತಿ ಮಾಡಿ ನೀರು ಉಳಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
6 ಟಿಎಂಸಿ ಸಾಮರ್ಥ್ಯದ ಈ ಬ್ಯಾರೇಜ್ ನಲ್ಲಿ, ನೀರು ಪೋಲಾಗುತ್ತಿರುವುದನ್ನು ಕಂಡ ರೈತ ಸಮೂಹ ಆತಂಕಕ್ಕೆ ಮುಳುಗಿದೆ. ಈ ಬ್ಯಾರೇಜ್ ಜಮಖಂಡಿ, ರಬಕವಿ ಬನಹಟ್ಟಿ ತಾಲೂಕಿನ 50 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯ ಹೊಂದಿದೆ. ಆದರೆ ಬ್ಯಾರೇಜ್ ಒಂದು ಗೇಟ್ನಿಂದ ನೀರು ನಿರಂತರವಾಗಿ ಪೋಲಾಗ್ತಿರೋದು ರೈತರ ಆತಂಕ್ಕೆ ಕಾರಣವಾಗಿದೆ. ಈಗಾಗಲೇ ಗೇಟ್ ಕ್ಲೋಸ್ ಮಾಡಲು ಅಧಿಕಾರಿಗಳು ಸಿಬ್ಬಂದಿ ವರ್ಗ ಬ್ಯಾರೇಜ್ ಬಳಿ ಬೀಡುಬಿಟ್ಟಿದ್ದು ಗೇಟ್ ದುರಸ್ತಿ ಕಾರ್ಯ ಶುರುಮಾಡಿದ್ದಾರೆ. ಹೆಚ್ಚುವರಿಯಾಗಿ ಹುಬ್ಬಳ್ಳಿಯಿಂದ ತಜ್ಞರನ್ನು ಕರೆಯಿಸಿ ಗೇಟ್ ಬಂದ್ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.
ಇತ್ತ ಸ್ಥಳಕ್ಕೆ ಭೇಟಿ ನೀಡಿರುವ ಜಮಖಂಡಿ ಎಸಿ ಶ್ವೇತಾ ಬಿಡಿಕರ್, ಸದ್ಯ ಏಳನೇ ಗೇಟ್ ನಿಂದ 15 ಸಾವಿರ ಕ್ಯೂಸೆಕ್ ನೀರು ಹರಿದು ನದಿ ಸೇರುತ್ತಿದೆ. ಆದರೆ 12 ಸಾವಿರ ಕ್ಯೂಸೆಕ್ ಒಳ ಹರಿವು ಇದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ರೈತರಿಗೆ ಸಮಸ್ಯೆ ಆಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಈಗಾಗಲೇ ಸಿಬ್ಬಂದಿ ದುರಸ್ತಿ ಕಾರ್ಯ ಶುರುಮಾಡಿದ್ದಾರೆ. ಗುರುವಾರ ಬೆಳಗ್ಗೆ ಒಳಗಡೆ ಈ ಸಮಸ್ಯೆ ಬಗೆ ಹರಿಯುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.