ಬೆಳಗಾವಿ : ಬೆಳೆಹಾನಿಯ ಬಗ್ಗೆ ಸಮೀಕ್ಷೆ ನಡೆಸುವಾಗ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಬೇಕು. ಕೆಲವು ಕಡೆಗಳಲ್ಲಿ ಜಂಟಿ ಸಮೀಕ್ಷೆ ಬಳಿಕವೂ ಬೆಳೆಹಾನಿ ಬಗ್ಗೆ ವರದಿಯಾಗಿರುವುದರಿಂದ ಇವುಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದರು.
ನಗರದ ಪ್ರವಾಸಿಮಂದಿರದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಈವರೆಗೆ ಒಟ್ಟಾರೆ 400 ಕೋಟಿ ರೂಪಾಯಿ ಹಾನಿಯಾಗಿದ್ದು, ಸದ್ಯಕ್ಕೆ ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ 105 ಕೋಟಿ ರೂಪಾಯಿ ಹಾನಿಯ ಕುರಿತು ವರದಿ ಸಲ್ಲಿಕೆಯಾಗಿರುತ್ತದೆ.
ತೋಟಗಾರಿಕೆ ಹಾಗೂ ತರಕಾರಿ ಬೆಳೆಗಳು ಸಂಪೂರ್ಣ ನಾಶಗೊಂಡಿರುತ್ತದೆ. ಆದ್ದರಿಂದ ಸಮೀಕ್ಷೆ ನಡೆಸುವಾಗ ಈ ಅಂಶಗಳನ್ನು ಪರಿಗಣಿಸಬೇಕು ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.