ಬಿಹಾರ: ಭೀಕರ ರಸ್ತೆ ಅಪಘಾತ ಸಂಭವಿಸಿ 15 ಜನರು ಸಾವನ್ನಪ್ಪಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆ ಮೆಹನಾರ್ನಲ್ಲಿ ನಡೆದಿದೆ. ಘಟನೆಯಲ್ಲಿ 7 ಮಕ್ಕಳು ಸೇರಿ 15 ಜನ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಉಪವಿಭಾಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೇಗವಾಗಿ ಬಂದ ಟ್ರಕ್, ಮಕ್ಕಳ ಸಹಿತ ಹಲವರ ಮೇಲೆ ಹರಿದಿದೆ. ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್ , ದುರಂತ ಎಂದು ಹೇಳಿದ್ದಾರೆ.
ಭೂಯಾನ್ ಬಾಬಾರವರ ಪೂಜೆ ಹಿನ್ನೆಲೆ ಔತಣಕೂಟ ಮುಗಿಸಿ ಎಲ್ಲರೂ ಹಿಂತಿರುಗುತ್ತಿದ್ದರು. ಈ ವೇಳೆ ಪೀಪಲ್ ಟ್ರೀ ಬಳಿ ನಿಂತಿದ್ದ ಜನರ ಮೇಲೆ ಟ್ರಕ್ ಹರಿದಿದೆ.
ಟ್ರಕ್ ಚಾಲಕ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಘಟನೆಯಲ್ಲಿ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಿಂದ ಜನರು ಟ್ರಕ್ ಚಾಲಕನ ವಿರುದ್ಧ ಕೆರಳಿದ ಪರಿಣಾಮ ಭಯಕ್ಕೆ ಟ್ರಕ್ ಚಾಲಕ ಟ್ರಕ್ನಲ್ಲೇ ಕುಳಿತುಕೊಂಡಿದ್ದಾನೆ. ಪೊಲೀಸರು ಸ್ಥಳಕ್ಕೆ ಬಂದು ಚಾಲಕನನ್ನು ವಶಕ್ಕೆ ಪಡೆದಿದ್ದರೂ ಜನರ ಆಕ್ರೋಶ ಕಡಿಮೆಯಾಗಿಲ್ಲ.
ಘಟನೆಯ ನಂತರ ಮೃತ ದೇಹಗಳು ಸ್ಥಳದಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸ್ಥಳಕ್ಕೆ ದೌಡಾಯಿಸಿದ ಸಂಬಂಧಿಕರು ಮೃತದೇಹಗಳನ್ನು ನೋಡಿ ಆಕ್ರಂದನ ಮುಗಿಲು ಮುಟ್ಟಿತು.
ಮಧ್ಯರಾತ್ರಿ ಮರಣೋತ್ತರ ಪರೀಕ್ಷೆಗಾಗಿ ಹಾಜಿಪುರ ಸದರ್ ಆಸ್ಪತ್ರೆಗೆ ರವಾನಿಸಲಾಯಿತು. ಆರೋಪಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಹಾಜಿಪುರ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ.ಇನ್ನು ಪ್ರಧಾನಿ ನರೇಂದ್ರ ಮೋದಿ ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡಿದೆ.