ಸತೀಶ್ ಜಾರಕಿಹೊಳಿ-ಲಕ್ಷ್ಮಣ್ ಸವದಿ ಪರಸ್ಪರ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳಲಿ

Jun 10, 2024 - 18:01
 133
Google  News Join WhatsApp Join Telegram View ePaper

ಸತೀಶ್ ಜಾರಕಿಹೊಳಿ-ಲಕ್ಷ್ಮಣ್ ಸವದಿ ಪರಸ್ಪರ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳಲಿ

Panchayat Swaraj Samachar News Desk.

ಬೆಂಗಳೂರು: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸೋಲನ್ನು ವಿನಯ ಪೂರ್ವಕವಾಗಿ ಸ್ವೀಕರಿಸುವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. 

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಬೆಳಗಾವಿಯ ಚುನಾವಣಾ ಫಲಿತಾಂಶ ಗಮನಿಸಿದರೆ ಬಿಜೆಪಿ ಹಾಗೂ ಎಂಇಎಸ್ ಒಂದಾದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಕಳೆದ 25 ವರ್ಷಗಳಿಂದಲೂ ಬೆಳಗಾವಿಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಎಂಇಎಸ್ ನಡುವೆ ತ್ರಿಕೋನ ಸ್ಪರ್ಧೆ ಇತ್ತು. ಆದರೆ, ಈ ಬಾರಿ ಆ ರೀತಿ ಆಗಿಲ್ಲ, ಸೋಲಿಗೆ ಅನೇಕ ಕಾರಣಗಳಿವೆ ಎಂದರು.  

ವಿಧಾನಸಭೆ ವಾತಾವರಣ ಬೇರೆ, ಲೋಕಸಭಾ ಚುನಾವಣೆ ವಾತಾವರಣವೇ ಬೇರೆ. ಚುನಾವಣಾ ಲೆಕ್ಕಾಚಾರದ ಬಗ್ಗೆ ಹೇಳುವುದಾದರೆ ಒಂದೊಂದು ಕ್ಷೇತ್ರಕ್ಕೆ ಒಂದೊಂದು ದೃಷ್ಟಿಕೋನ ಇರುತ್ತದೆ. ಆದರೆ, ಬೆಳಗಾವಿಯಲ್ಲಿ ಕಾಂಗ್ರೆಸ್ ಗೆಲುವಿಗೆ ಮೊದಲಿನಿಂದಲೂ ಉತ್ತಮ ವಾತಾವರಣ ಇತ್ತು. ಜನಬೆಂಬಲ ಕೂಡ ವ್ಯಕ್ತವಾಗಿತ್ತು. ಈ ನಡುವೆಯೂ ಫಲಿತಾಂಶ ನಮಗೆ ಕೈ ಕೊಟ್ಟಿತು ಎಂದು ಹೇಳಿದರು. 

ಕಾಂಗ್ರೆಸ್ ಸೋಲಿನ ಬಗ್ಗೆ ಹೈಕಮಾಂಡ್ ಪರಾಮರ್ಶೆ ಸಮಿತಿ ರಚಿಸಿರುವ ವರದಿ ಬಗ್ಗೆ ನನಗೆ ಗೊತ್ತಿಲ್ಲ ಎಂದು ಈ ವೇಳೆ ಸಚಿವರು ಸ್ಪಷ್ಟಪಡಿಸಿದರು.  

ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲದಿರಬಹುದು. ಆದರೆ, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಜನರ ಸಬಲೀಕರಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸ್ವಾರ್ಥ ಬಿಟ್ಟು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು. 

 ಸ್ವಾರಿ ಕೇಳಿದ್ದು ಸಿಎಂ ದೊಡ್ಡ ಗುಣ

ಭಾನುವಾರ ಬೆಳಗಾವಿ ನಾಯಕರ ಭೇಟಿ ವೇಳೆ, ಸಿಎಂ ಸಿದ್ದರಾಮಯ್ಯ ಸ್ವಾರಿ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸ್ವಾರಿ ಕೇಳಿದ್ದು ಮುಖ್ಯಮಂತ್ರಿಯವರ ದೊಡ್ಡ ಗುಣ ಎಂದು ಹೇಳಿದರು. 

 ಸತೀಶ್ ಜಾರಕಿಹೊಳಿ- ಲಕ್ಷ್ಮಣ್ ಸವದಿ ಸಮಸ್ಯೆ ಬಗೆ ಹರಿಸಿಕೊಳ್ಳಲಿ

ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಲಕ್ಷ್ಮಣ್ ಸವದಿ ನಡುವಿನ ವಾಕ್ಸಮರಕ್ಕೆ ಪ್ರತಿಕ್ರಿಯಿಸಿದ ಸಚಿವರು, ತಾವು ಯಾರೊಬ್ಬರ ಪರವಾಗಿ ಇಲ್ಲ, ಇಬ್ಬರ ಪರವಾಗಿಯೂ ಇದ್ದೇನೆ. ಇಬ್ಬರೂ ದೊಡ್ಡ ನಾಯಕರು, ಒಟ್ಟಿಗೆ ಕುಳಿತು ಮಾತಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಈ ವೇಳೆ ಸಚಿವರು ಮನವಿ ಮಾಡಿದರು. 

ಸಚಿವರೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಮತ್ತಿತರರು ಉಪಸ್ಥಿತರಿದ್ದರು.

Google News Join Facebook Live 24/7 Help Desk

Tags: