ಯುವ ಸಮೂಹಕ್ಕೆ ಸಾಹಿತ್ಯದ ಅರಿವು ಅವಶ್ಯ: ಡಾ. ವಿ.ಎಸ್ ಕಟಗಿಹಳ್ಳಿಮಠ

ಸಾಹಿತ್ಯ ಸಮ್ಮೇಳನಗಳಿಂದ ಕನ್ನಡದ ಜ್ಞಾನ ಹೆಚ್ಚುತ್ತಿದೆ: ಡಾ. ವಿ.ಎಸ್ ಕಟಗಿಹಳ್ಳಿಮಠ ಅಭಿಪ್ರಾಯ

Jun 9, 2024 - 15:44
 37
Google  News Join WhatsApp Join Telegram View ePaper

ಯುವ ಸಮೂಹಕ್ಕೆ ಸಾಹಿತ್ಯದ ಅರಿವು ಅವಶ್ಯ: ಡಾ. ವಿ.ಎಸ್ ಕಟಗಿಹಳ್ಳಿಮಠ

Panchayat Swaraj Samachar News Desk.

ಬಾಗಲಕೋಟೆ: ಓದು ಮತ್ತು ಬರಹಗಳು ಮನುಷ್ಯನಲ್ಲಿ ಶ್ರದ್ಧೆ ಮತ್ತು ಜ್ಞಾನಸ್ತ ಮನೋಭಾವನೆಯನ್ನು ಬೆಳೆಸುತ್ತವೆ. ಹೊಸ ತಲೆಮಾರಿನ ಬರಹಗಾರರು ಸಹನೆ, ಮತ್ತು ತಾಳ್ಮೆಯನ್ನು ಬೆಳಸಿಕೊಳ್ಳಬೇಕು. ಪ್ರತಿರೋಧಾತ್ಮಕ, ಪ್ರಚೋಧನಾತ್ಮಕ ಆರೋಗ್ಯಪರ ಚಿಂತನೆಗಳನ್ನು ರೂಪಿಸಿಕೊಳ್ಳಬೇಕು ಎಂದು ಬಿವಿವಿ ಸಂಘದ ಆಡಳಿತಾಧಿಕಾರಿಗಳು ಹಾಗೂ ಹಿರಿಯ ಸಾಹಿತಿಗಳಾದ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಹೇಳಿದರು.

ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯ, ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ ಇವರ ಸಹಯೋಗದಲ್ಲಿ ರವಿವಾರ ಹಮ್ಮಿಕೊಳ್ಳಲಾದ ಮೇಘಮೈತ್ರಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಆಧುನಿಕ ತಲೆಮಾರಿಗೆ ಹೊಸ ಚಿಂತನೆಗಳು ಬೇಕು. ಸಾಹಿತಿಯಾಗಲು ದೊಡ್ಡ ಕೃತಿಗಳನ್ನೇ ಬರೆಯಬೇಕಿಲ್ಲ ಸಮಾಜಕ್ಕೆ ಉಪಯುಕ್ತವಾಗುವ ಎರಡು ಸಾಲುಗಳನ್ನು ಬರೆದರೂ ಅವರು ಸಾಹಿತ್ಯದ ಪರಿಪಾಲಕರೆ. ಪ್ರಾಚಿನ ಕರ್ನಾಟಕ ಹೇಗಿತ್ತು ನಾವು ಹೇಗಿದ್ದೇವೆ ಎಂದು ಮೌಲ್ಯಮಾಪನ ಮಾಡಿಕೊಳ್ಳಬೇಕಿದೆ ಎಂದರು.

ಬಾಗಲಕೋಟೆ ಪ್ರಾಚಿನ ಕಾಲದಿಂದಲೂ ವಿಧ್ವತ್ಮಯದಿಂದ ಕೂಡಿದ ಸ್ಥಳವಾಗಿದ್ದು ಇಂದು 400ಕ್ಕೂ ಹೆಚ್ಚು ಲೇಖಕಕರನ್ನು ಪೋಷಿಸಿ ಬೆಳೆಸುತ್ತಿದೆ. ಓದುಗರನ್ನು ಸೆಳೆಯುವ ಸಾಹಿತ್ಯ ರೂಡಿಸಿಕೊಳ್ಳಬೇಕಿದೆ. ಓದುಗರನ್ನು ಸೃಷ್ಟಿಮಾಡಲು ಸಾಧ್ಯವಾಗದಿದ್ದಾಗ ಬರವಣಿಗೆಗೆ ಮಹತ್ವ ಇಲ್ಲ. ಹಳೆ ತಲೆಮಾರಿನ ಲೇಖಕರು ಮತ್ತು ಹೊಸ ತಲೆಮಾರಿನ ಸಾಹಿತಿಗಳನ್ನು ಒಂದುಗೂಡಿಸಿ ಸಮ್ಮೇಳನಗಳನ್ನು ಮಾಡಬೇಕು ಇದರಿಂದ ಯುವ ಜನಾಂಗಕ್ಕೆ ಸಾಹಿತ್ಯದ ಅರಿವು ಮೂಡಿಸಲು ಸಾಧ್ಯ. ಸಮಾಜದಲ್ಲಿ ಅರಾಜಕತೆ ತಲೆದೋರಿದ್ದು ಕಾಯಕದಲ್ಲಿ ಆಸಕ್ತಿ ಇಲ್ಲದ ಜನರನ್ನು ಬಡಿದೆಬ್ಬಿಸಲು ಇಂತಹ ಸಮ್ಮೇಳನ, ಸಮಾವೇಶಗಳು ನಡೆಯುವುದು ಅವಶ್ಯಕವಾಗಿದೆ ಎಂದರು.

ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಬೈರಮಂಗಲ ರಾಮೇಗೌಡ ಉದ್ಘಾಟನಪರ ಮಾತುಗಳನ್ನಾಡಿ ಕನ್ನಡ ಸಾಹಿತ್ಯದಲ್ಲಿರುವ ಸಮಗ್ರತೆ ಬೇರೆ ಸಾಹಿತ್ಯದಲ್ಲಿಲ್ಲ. ಡಾ. ವಿಜಯಕುಮಾರ್ ಕಟಗಿಹಳ್ಳಿಮಠ ಅಪರೂಪದ ವ್ಯಕ್ತಿತ್ವ. ಅವರು ಸಾಹಿತಿಗಳಾಗಿ ಅಷ್ಟೇ ಅಲ್ಲದೇ ಒಬ್ಬ ನಿಷ್ಠಾವಂತ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸಾಧನೆ ಮಾಡಿದ್ದು ಕನ್ನಡ ಲೋಕಕ್ಕೆ ಅಪರೂಪದ ಕೊಡುಗೆಯಾಗಿದ್ದಾರೆ. ಬಸವೇಶ್ವರ ವಿದ್ಯಾವರ್ಧಕ ಸಂಘವು ಕೇವಲ ಉತ್ತರ ಕರ್ನಾಟಕಕ್ಕೆ ಸೀಮಿತವಾಗದೇ ಕರ್ನಾಟಕದಾದ್ಯಂತ ಗುಣಮಟ್ಟದ ಶಿಕ್ಷಣ ಹಂಚುವ ಕೆಲಸ ಮಾಡಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಮಲ್ಲಿಕಾ ಘಂಟಿ ಅವರು ಮಾತನಾಡಿ ಸಮಾಜದಲ್ಲಿ ಹೆಣ್ಣುಮಕ್ಕಳ ಪಾತ್ರ ದೊಡ್ಡದು. ಸಾಹಿತ್ಯಗಳನ್ನು ಗೌರವಿಸುವುದು ರಾಜಕೀಯದಲ್ಲಿ ಕಡಿಮೆಯಾಗುತ್ತಿರುವುದು ವಿಷಾದನಿಯ. ದೇಶದಲ್ಲಿ ಜಾತಿಯತೆ ತಲೆ ಎತ್ತಿ ನಿಂತಿದೆ. ಪ್ರಜಾಪ್ರಭುತ್ವದಲ್ಲಿ ಜಾತಿ ಸಂಘಟನೆಗಳು ಹೆಚ್ಚುತ್ತಿದ್ದು ಪ್ರಭುದ್ಧತೆ ಕಡಿಮೆಯಾಗಿದೆ. ಗಾಂಧೀಜಿಯವರ ಅಹಿಂಸೆಯ ತತ್ವದ ಮೂಲಕ ಭಾರತವನ್ನು ಮುನ್ನಡೆಸಬೇಕಿದೆ. ಯುವ ಬರಹಗಾರ ಸಂಖ್ಯೆ ಹೆಚ್ಚಾಗಿದ್ದು ಅವರು ಎಲ್ಲರ ಮನಸ್ಸು ತಟ್ಟಬೇಕಾಗಿದೆ. ಪುಸ್ತಕದ ಜೋತೆಗೆ ಸಾಹಿತ್ಯವನ್ನು ಓದುವ ಕೆಲಸ ಮಾಡಿ ಎಂದರು.

ಕಾರ್ಯಕ್ರಮದಲ್ಲಿ ಕಮತಗಿಯ ಮೇಘಮೈತ್ರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಂ. ರಮೇಶ ಕಮತಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಮತಗಿಯ ಹೀರೆಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ , ನಿವೃತ್ತ ಪ್ರಾಂಶುಪಾಲರಾದ ಚಂದ್ರಶೇಖರ ನಾದೂರು, ವಿಜಯ ಸಂಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಶಾಂತರಾಜು ಉಪಸ್ಥಿತರಿದ್ದರು.

ಬಾಕ್ಸ್ ಸುದ್ದಿ: ಕಾರ್ಯಕ್ರಮದಲ್ಲಿ ಡಾ. ವಿ.ಎಸ್ ಕಟಗಿಹಳ್ಳಿಮಠ ಅವರ ‘ವ್ಯಕ್ರಿಚಿತ್ರ ಸಂಪದ’ ಮತ್ತು ಡಾ. ಶಾಂತರಾಜು ಅವರ ‘ಅಂತರ್ಶೋಧ’ ಕೃತಿ ಬಿಡುಗಡೆ ಮಾಡಲಾಯಿತು. ನಿವೃತ್ತ ಪ್ರಾಂಶುಪಾಲರಾದ ಪ್ರೊ. ಚಂದ್ರಶೇಖರ ನಾದೂರು ಅಂತರ್ಶೋಧ ಕೃತಿ ಹಾಗೂ ಡಾ. ಶಾಂತರಾಜು ವ್ಯಕ್ತಿಚಿತ್ರ ಸಂಪದ ಕುರಿತು ವಿಮರ್ಶೆ ಮಾಡಿದರು. ಬಳಿಕ ವಿಚಾರಗೋಷ್ಠ್ಠಿ ಮತ್ತು ಕವಿಗೋಷ್ಠಿಗಳನ್ನು ಹಮ್ಮಿಕೊಳ್ಳಲಾಯಿತು.

Google News Join Facebook Live 24/7 Help Desk

Tags: