LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಶಾಂತ್ ಕಿಶೋರ್ ವಿರುದ್ಧ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಯನ್ನು ಬಿಜೆಪಿ ದಿಢೀರ್‌ ಬದಲಾಯಿಸಿದ್ದು ಯಾಕೆ?

Advertisement
Advertisement

ಪಾಟ್ನಾ: ಬಿಹಾರದ  ಅತ್ಯಂತ ಪ್ರತಿಷ್ಠಿತ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ  ಅಖಾಡದಲ್ಲಿ ರಾಜಕೀಯ ಲೆಕ್ಕಾಚಾರಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿವೆ. ರಾಜಕೀಯ ತಂತ್ರಜ್ಞ ಹಾಗೂ ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ಎದುರು ಕಣಕ್ಕಿಳಿಸಲು ಈ ಹಿಂದೆ ತಾನು ಅಂತಿಮಗೊಳಿಸಿದ್ದ ಅಭ್ಯರ್ಥಿಯನ್ನು ಬಿಜೆಪಿ(BJP) ದಿಢೀರನೆ ಬದಲಾಯಿಸಿದೆ.

ಬಿಜೆಪಿ ಮೊದಲು ಘೋಷಿಸಿದ್ದ ಅಭ್ಯರ್ಥಿ ಅಭಿಷೇಕ್ ಬಂಟಿ ಗುರುವಾರವಷ್ಟೇ ಭಾರಿ ಜನಸ್ತೋಮದೊಂದಿಗೆ ಅತ್ಯಂತ ಅದ್ಧೂರಿಯಾಗಿ ನಾಮಪತ್ರ ಸಲ್ಲಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸೇರಿದಂತೆ ಎನ್‌ಡಿಎ  ಒಕ್ಕೂಟದ ಹಲವು ಪ್ರಮುಖ ಹಿರಿಯ ನಾಯಕರು ಭಾಗವಹಿಸಿ ಬಲ ಪ್ರದರ್ಶನ ಮಾಡಿದ್ದರು. ಆದರೆ ನಾಮಪತ್ರ ಸಲ್ಲಿಕೆಯಾದ ಕೇವಲ 24 ಗಂಟೆಗಳ ಒಳಗಾಗಿ ಇಡೀ ಚಿತ್ರಣವೇ ಬದಲಾಗಿದೆ.

ಶುಕ್ರವಾರ ಸಂಜೆ ದಿಢೀರನೆ ರಾಜ್ಯ ಬಿಜೆಪಿ ಅಧ್ಯಕ್ಷ ಸಂಜಯ್ ಸರಾಫ್ ಅವರಿಗೆ ಪತ್ರ ಬರೆದ ಅಭಿಷೇಕ್ ಬಂಟಿ, ವೈಯಕ್ತಿಕ ಹಾಗೂ ಕೌಟುಂಬಿಕ ಕಾರಣಗಳಿಂದಾಗಿ ನನಗೆ ಈ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಬದಲಾವಣೆ ಯಾಕೆ?
ಬಿಜೆಪಿ ಮೊದಲು ಘೋಷಿಸಿದ್ದ ಅಭ್ಯರ್ಥಿ ಅಭಿಷೇಕ್ ಬಂಟಿ ಅವರ ತಂದೆ ರವೀಂದ್ರ ಪ್ರಸಾದ್  ಬಿಹಾರದ ಮಾಜಿ ಸಿಎಂ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದರು.

ಒಂದು ವೇಳೆ ಅಭಿಷೇಕ್ ಬಂಟಿ ಕಣದಲ್ಲಿದ್ದರೆ, ಪ್ರಶಾಂತ್ ಕಿಶೋರ್ ಈ ಹಗರಣದ ವಿಷಯವನ್ನು ಚುನಾವಣಾ ಪ್ರಚಾರದಲ್ಲಿ ಅತ್ಯಂತ ಉಗ್ರವಾಗಿ ಪ್ರಸ್ತಾಪಿಸಲಿದ್ದಾರೆ ಎಂಬ ಭೀತಿ ಬಿಜೆಪಿಯನ್ನು ಕಾಡಿತ್ತು. ಇದು ಚುನಾವಣಾ ಫಲಿತಾಂಶದ ಮೇಲೆ ಮಾತ್ರವಲ್ಲದೆ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬಿಜೆಪಿಯ ಸಿದ್ಧಾಂತಕ್ಕೆ ಮತ್ತು ಇಮೇಜ್‌ಗೆ ಭಾರಿ ಹೊಡೆತ ನೀಡಬಹುದು ಎಂದು ಹೈಕಮಾಂಡ್ ತೀರ್ಮಾನಿಸಿತ್ತು. 

2022ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು 139 ಕೋಟಿ ರೂ. ಮೊತ್ತದ ಡೋರಂಡಾ ಕೋಶಾಗಾರ ಮೇವು ಹಗರಣದಲ್ಲಿ ಲಾಲು ಯಾದವ್ ಸೇರಿದಂತೆ 75 ಜನರನ್ನು ದೋಷಿಗಳೆಂದು ಘೋಷಿಸಿತ್ತು. ಈ ಹಗರಣ ನಡೆದ ಅವಧಿಯಲ್ಲಿ ಮಗಧ ಕೆಮಿಕಲ್ ಕಾರ್ಪೊರೇಶನ್‌ನ ಮ್ಯಾನೇಜರ್ ಆಗಿದ್ದ ಅಭಿಷೇಕ್ ಬಂಟಿ ತಂದೆ ರವೀಂದ್ರ ಪ್ರಸಾದ್ ಅವರಿಗೆ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ಹಾಗೂ 75,000 ದಂಡ ವಿಧಿಸಿತ್ತು.
 
ಈ ಹಗರಣಕ್ಕೆ ಸಂಬಂಧಿಸಿದಂತೆ 2001 ಮತ್ತು 2003 ರ ನಡುವೆ ಸಿಬಿಐ ಮೂರು ಚಾರ್ಜ್‌ಶೀಟ್‌ಗಳನ್ನು ಸಲ್ಲಿಕೆ ಮಾಡಿತ್ತು. ಸುಮಾರು 575 ಸಾಕ್ಷಿಗಳು ಮತ್ತು 4,200 ದಾಖಲೆಗಳನ್ನು ಪರಿಶೀಲಿಸಿದ ನಂತರ ರವೀಂದ್ರ ಪ್ರಸಾದ್ ಅವರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು.

ಪ್ರಶಾಂತ್ ಕಿಶೋರ್ ಗೇಮ್ ಪ್ಲಾನ್!
ತಮ್ಮ ಮೊದಲ ಚುನಾವಣಾ ಅಖಾಡದಲ್ಲಿರುವ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್, ಬಿಜೆಪಿ ಅಭ್ಯರ್ಥಿಯ ತಂದೆಯ ಹಗರಣಕ್ಕೆ ಸಂಬಂಧಿಸಿದ ಎಲ್ಲಾ ನ್ಯಾಯಾಲಯದ ದಾಖಲೆಗಳು ಮತ್ತು ಸಿಬಿಐ ಚಾರ್ಜ್‌ಶೀಟ್‌ಗಳನ್ನು ರಹಸ್ಯವಾಗಿ ಪಡೆದುಕೊಂಡಿದ್ದರು. ಇದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿ ಬಿಜೆಪಿಯನ್ನು ಹೆಜ್ಜೆ ಹೆಜ್ಜೆಗೂ ತರಾಟೆಗೆ ತೆಗೆದುಕೊಳ್ಳಲು ಪ್ಲಾನ್ ಮಾಡಿದ್ದರು.

ಈ ಅಪಾಯವನ್ನು ಕೊನೆ ಕ್ಷಣದಲ್ಲಿ ಅರಿತುಕೊಂಡ ಹಿರಿಯ ಬಿಜೆಪಿ ನಾಯಕರು ತಕ್ಷಣವೇ ‘ಡ್ಯಾಮೇಜ್ ಕಂಟ್ರೋಲ್’ ಮೋಡ್‌ಗೆ ಜಾರಿದರು. ತಾಂತ್ರಿಕ ಹಾಗೂ ಕಾನೂನಾತ್ಮಕ ಹಿನ್ನಡೆಯಿಂದ ಪಾರಾಗಲು ಬಂಟಿ ಅವರಿಂದ ನಾಮಪತ್ರವನ್ನು ವಾಪಸ್ ಕೊಡಿಸಿ, ಅವರ ಜಾಗಕ್ಕೆ ಪಕ್ಷದ ಸಾಮಾನ್ಯ ಹಾಗೂ ಯುವ ಕಾರ್ಯಕರ್ತನಾದ 32 ವರ್ಷದ ನೀರಜ್ ಸಿನ್ಹಾ ಅವರನ್ನು ಹೊಸ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.

ಬಂಕಿಪುರದ ಪ್ರತಿಷ್ಠೆಯ ಜಟಾಪಟಿ
ಬಿಜೆಪಿ ನಾಯಕರಾಗಿದ್ದ ನಿತಿನ್ ನಬಿನ್‌ ಅವರು ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಬಂಕಿಪುರ ಕ್ಷೇತ್ರ ತೆರವಾಗಿದ್ದು, ಉಪಚುನಾವಣೆ ಎದುರಾಗಿದೆ. 1995 ರಿಂದಲೂ ಈ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದೆ. ನಿತಿನ್ ನವೀನ್ ಅವರ ತಂದೆ ನವೀನ್ ಕಿಶೋರ್ ಸಿನ್ಹಾ ಅವರ ಕಾಲದಿಂದಲೂ ಇಲ್ಲಿ ಬಿಜೆಪಿ ಸೋತಿಲ್ಲ. ಆದರೆ ಈ ಬಾರಿ ಅಖಾಡದಲ್ಲಿ ಪ್ರಶಾಂತ್ ಕಿಶೋರ್ ಸ್ವತಃ ಇರುವುದರಿಂದ ಹಾಗೂ ಆರ್‌ಜೆಡಿಯಿಂದ ರೇಖಾ ಗುಪ್ತಾ ಕಣದಲ್ಲಿ ಇರುವುದರಿಂದ ಹಿಂದೆಂದೂ ಕಾಣದ ಭೀಕರ ತ್ರಿಕೋನ ಸ್ಪರ್ಧೆಗೆ ಬಂಕಿಪುರ ಸಾಕ್ಷಿಯಾಗಿದೆ.

Author
Editor: Ratnakar Goundi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭವ್ಯ ತಿರಂಗಾ ರ್ಯಾಲಿ ದೇಶಭಕ್ತಿಯ ಸಂಭ್ರಮದೊಂದಿಗೆ ಯಶಸ್ವಿ3 ನಿಮಿಷದಲ್ಲಿ ಹನುಮಾನ್ ಚಾಲೀಸ ಪಠಣ – ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ 4 ವರ್ಷದ ಬಾಲಕ!ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು – ಆ.14 ರಂದು ವಿಧಾನಸೌಧದ ಮುಂದೆ ಪ್ರತಿಭಟನೆಗೆ ಸಿದ್ಧತೆಪರಪ್ಪನ ಅಗ್ರಹಾರದಲ್ಲಿ ಮೊಬೈಲ್‌ ಪತ್ತೆ ಪ್ರಕರಣ – 2ನೇ ಎಫ್‌ಐಆರ್‌ ದಾಖಲುಯಂತ್ರಕ್ಕೆ ಸಿಲುಕಿದ್ದ ಅಡುಗೆ ಸಿಬ್ಬಂದಿಯನ್ನು ರಕ್ಷಿಸಿದ ಬಾಲಕ – ಪುಟಾಣಿಯ ಸಾಹಸಕ್ಕೆ ಡಿಕೆಶಿ ಮೆಚ್ಚುಗೆಆ.15ರಂದು ವಿಧಾನಸೌಧದಲ್ಲಿ ಫ್ರೀಡಂ ಹಬ್ಬ – QR ಕೋಡ್ ಮೂಲಕ ಪೂರ್ವ ನೋಂದಣಿ ಕಡ್ಡಾಯಕೇಸ್‌ ಇತ್ಯರ್ಥಕ್ಕೆ ಲಂಚಕ್ಕೆ ಕೈಯೊಡ್ಡಿದ ಪಿಎಸ್‌ಐ ʻಲೋಕಾʼ ಬಲೆಗೆಪ್ರೇಯಸಿ ಆತ್ಮಹತ್ಯೆ ಬೆನ್ನಲ್ಲೇ ನೇಣಿಗೆ ಕೊರಳೊಡ್ಡಿದ ಪ್ರಿಯಕರಸೋಷಿಯಲ್‌ ಮೀಡಿಯಾ ಮೂಲಕ ಪಾಕ್ ಜೊತೆ ಸಂಪರ್ಕ ಶಂಕೆ; ಇಬ್ಬರು ವಶಕ್ಕೆಹೈಕೋರ್ಟ್‌ನಲ್ಲೂ ದರ್ಶನ್‌ಗೆ ಹಿನ್ನಡೆ – ಮಾಫಿ ಸಾಕ್ಷಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿಲ್ಲ ಎಂದ ಕೋರ್ಟ್‌