ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿ ಸ್ಮಾರ್ಟ್ ಸಿಟಿ ಯೋಜನೆಗಾಗಿ ಸರ್ಕಾರ ಕೈಗೊಂಡಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಹೊಸೂರು ಗ್ರಾಮದ 14 ರೈತರು ಸಲ್ಲಿರುವ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದೆ.
ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಏಕಸದಸ್ಯ ಪೀಠವು ವಾದ-ಪ್ರತಿವಾದಗಳನ್ನು ಆಲಿಸಿತು. ಅರ್ಜಿದಾರರಾದ 14 ರೈತರ ಪರ ವಾದ ಮಂಡಿಸಿದ ವಕೀಲ ಎಂ.ಎಚ್. ಪ್ರಕಾಶ್, “ಸರ್ಕಾರವು ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಪಾಲಿಸದೇ ಏಕಾಏಕಿ ಭೂಸ್ವಾಧೀನಕ್ಕೆ ಮುಂದಾಗಿದೆ. ಈ ಯೋಜನೆಯ ಮೂಲಕ ಸರ್ಕಾರವೇ ಬರೋಬ್ಬರಿ ₹34,000 ಕೋಟಿ ರೂಪಾಯಿ ಲಾಭ ಗಳಿಸಲು ಸಂಚು ರೂಪಿಸಿದೆ ಎಂದು ಪೀಠದ ಗಮನಕ್ಕೆ ತಂದರು.
ವಿಚಾರಣೆ ವೇಳೆ ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, “ಈ ಯೋಜನೆಗೆ ಮುನ್ನ 2013ರ ಭೂಸ್ವಾಧೀನ ಕಾಯ್ದೆಯ ನಿಯಮಗಳನ್ನು ಸರಿಯಾಗಿ ಪಾಲಿಸಲಾಗಿದೆಯೇ? “ಸೆಕ್ಷನ್ 10ಎ (Section 10A) ಅಡಿಯಲ್ಲಿ ವಿನಾಯಿತಿ ಪಡೆಯಲು ಇದು ಗ್ರಾಮೀಣ ವಸತಿ ಯೋಜನೆಯೇ? ಎಂದು ರಾಜ್ಯ ಸರ್ಕಾರಕ್ಕೆ ನೇರ ಪ್ರಶ್ನೆಗಳನ್ನು ಎಸೆದಿದೆ.
ಹೈಕೋರ್ಟ್ ಪ್ರಶ್ನೆಗಳಿಗೆ ಉತ್ತರಿಸಿದ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಪ್ರದೇಶದ ಬಹುತೇಕ ರೈತರು ಈಗಾಗಲೇ ಭೂಸ್ವಾಧೀನಕ್ಕೆ ಸಮ್ಮತಿ ಸೂಚಿಸಿದ್ದಾರೆ. ಕಾನೂನಿನ ಸೆಕ್ಷನ್ 10ಎ ಅಡಿಯಲ್ಲಿ ಅಗತ್ಯ ವಿನಾಯಿತಿ ಪಡೆಯಲಾಗಿದ್ದು, ಇನ್ನೂ ಪರಿಹಾರದ (Compensation) ಅಂತಿಮ ತೀರ್ಪು ನಿಗದಿಯಾಗಿಲ್ಲ ಎಂದು ತಿಳಿಸಿದರು.
ಸರ್ಕಾರದ ಈ ವಾಗ್ದಾನವನ್ನು ಅಧಿಕೃತವಾಗಿ ದಾಖಲಿಸಿಕೊಂಡ ನ್ಯಾಯಪೀಠ, ಪ್ರಕರಣದ ಮುಂದಿನ ವಿಚಾರಣೆಯನ್ನು 3 ವಾರಗಳ ಕಾಲ ಮುಂದೂಡಿತು.

